ಬುಧವಾರ, ಸೆಪ್ಟೆಂಬರ್ 29, 2021

ದೇವ ನಿನ್ನ ರಾಜ್ಯದ ನ್ಯಾಯವಿದೇನಾ?

 ವಿಶೇಷ ಗಾನಗಣಿಗಾರಿಕೆ






ಗುಡಿ ಮಂದಿರಗಳ ಪ್ರವೇಶ ಬಹಿಷ್ಕಾರದ ಹೊತ್ತಲ್ಲಿ ವಿಶೇಷಗಾನಗಣಿಗಾರಿಕೆ


 "ಚಿತ್ರ ಸಾಹಿತ್ಯದ ಮೂಲಕ ದೇವರನ್ನೇ ಪ್ರಶ್ನೆ ಮಾಡಿದ ಕೆಲ ಸಿನಿಸಾಹಿತ್ಯಗಳ  ಗಾನವಿಶ್ಲೇಷಣೆ"


"ಮನ್ಸಾರ್ನ್ ಮಾಡಿ ಅವರಿಷ್ಟ್‌ದಂಗೆ ಆಡಾಕ್ ಬುಟ್‌ಬಿಟ್ಟೆ

ನಿನ್ನೇ ಅವ್ರು ಕಲ್ನಾಗ್ ಕಡದು ಗುಡಿಯಾಗ್ ಕೂಡ್ಬುಟ್ರು

ನಿನ್ನ ಹೆಸರನ್ ಹೇಳ್ಕಂಡ್ ಎಷ್ಟೋ ಪಾಪ ಮಾಡ್ತಾರೆ

ಹಣ್ಣು ಕಾಯಿ ಲಂಚ ಕೊಟ್ಟು ಕ್ಷಮ್ಸು ಅಂತಾರೆ, ದ್ಯಾವ್ರೇ..."


"ದೇವ ನಿನ್ನ ರಾಜ್ಯದ ನ್ಯಾಯವಿದೇನಾ?


"ನೀನಾ ಭಗವಂತ..? ಜಗಕುಪಕರಿಸಿ,ನನಗಪಕರಿಸೋ ಜಗದೋದ್ದಾರಕ ನೀನೇನಾ?"...



 1975 ರ ಹೊತ್ತಲ್ಲಿ ಸೃಜನಶೀಲ ನಿರ್ದೇಶಕರಾದ ಗೀತಪ್ರಿಯರವರು "ಬೆಳುವಲದ ಮಡಿಲಲ್ಲಿ" ಎಂಬ ಚಿತ್ರ ತೆರೆಗೆ ತಂದಿದ್ದರು.ರಾಜೇಶ್,ಕಲ್ಪನ ಅಭಿನಯದ ಈ ಚಿತ್ರ ಸಂಪೂರ್ಣ ಗ್ರಾಮ್ಯಕಥೆಯಾಗಿತ್ತು.ಕಥೆ,ಹಾಡು,ಸಂಭಾಷಣೆ,ಅಭಿನಯ ಎಲ್ಲವೂ ಸುಂದರವಾಗಿ ಮೇಳೈಸಿತ್ತು.

  ಈ ಚಿತ್ರದ ಹಾಡೊಂದು ಬಾಲ್ಯದಿಂದಲೂ ನನ್ನ ಕಾಡುವ ಹಾಡಾಗಿತ್ತು.ಆ ಹಾಡಿನ ಸಾಹಿತ್ಯ. ಅದಕ್ಕೆ ತಕ್ಕ ರಾಜನ್ ನಾಗೇಂದ್ರ ಸಂಗೀತ ಅದಕ್ಕೆ ಹೊಂದುವ ಹಾಗೆ ಅದ್ಬುತವಾಗಿ ಹಾಡಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಂಠಸಿರಿ ಈ ಹಾಡಿಗೊಂದು ಖದರ್ ನೀಡಿತ್ತು.



ಬೆಳುವಲದ ಮಡಿಲಲ್ಲಿ (1975)


ಸಾಹಿತ್ಯ: ಗೀತಪ್ರಿಯ  ಸಂಗೀತ: ರಾಜನ್-ನಾಗೇಂದ್ರ   ಹಾಡಿದವರು: ಎಸ್.ಪಿ.ಬಿ.



ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು, ಎಲ್ಲಿ ಕುಂತಿದ್ದೀ

ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ... ನೀ ಏನು ಮಾಡ್ತಿದ್ದೀ

ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದೀ

ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ...

ಎಲ್ಲಾರ್ನ್ ಕಾಯೋ ದ್ಯಾವ್ರೇ....


ಮನ್ಸಾರ್ನ್ ಮಾಡಿ ಅವರಿಷ್ಟ್‌ದಂಗೆ ಆಡಾಕ್ ಬುಟ್‌ಬಿಟ್ಟೆ

ನಿನ್ನೇ ಅವ್ರು ಕಲ್ನಾಗ್ ಕಡದು ಗುಡಿಯಾಗ್ ಕೂಡ್ಬುಟ್ರು

ಮನ್ಸಾರ್ನ್ ಮಾಡಿ ಅವರಿಷ್ಟ್‌ದಂಗೆ ಆಡಾಕ್ ಬುಟ್‌ಬಿಟ್ಟೆ

ನಿನ್ನೇ ಅವ್ರು ಕಲ್ನಾಗ್ ಕಡದು ಗುಡಿಯಾಗ್ ಕೂಡ್ಬುಟ್ರು

ನಿನ್ನ ಹೆಸರನ್ ಹೇಳ್ಕಂಡ್ ಎಷ್ಟೋ ಪಾಪ ಮಾಡ್ತಾರೆ

ನಿನ್ನ ಹೆಸರನ್ ಹೇಳ್ಕಂಡ್ ಎಷ್ಟೋ ಪಾಪ ಮಾಡ್ತಾರೆ

ಹಣ್ಣು ಕಾಯಿ ಲಂಚ ಕೊಟ್ಟು ಕ್ಷಮ್ಸು ಅಂತಾರೆ, ದ್ಯಾವ್ರೇ...

ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದೀ

ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ...

ಎಲ್ಲಾರ್ನ್ ಕಾಯೋ ದ್ಯಾವ್ರೇ....


ತೆಂಗೀನ್ ಮರ ಸಾಕಿದ್ರೆ ಎಳನೀರ್ ಕೊಡ್ತದೆ

ಪ್ರೀತ್ಸಿದ್ ಬೆಳ್ಸಿದ್ ಮಕ್ಕಳಿಂದ ಕಣ್ಣೀರ್ ಸಿಗ್ತದೆ

ಬರೀ ಕಣ್ಣೀರ್ ಸಿಗ್ತದೆ ಅಹ್...

ತೆಂಗೀನ್ ಮರ ಸಾಕಿದ್ರೆ ಎಳನೀರ್ ಕೊಡ್ತದೆ

ಪ್ರೀತ್ಸಿದ್ ಬೆಳ್ಸಿದ್ ಮಕ್ಕಳಿಂದ ಕಣ್ಣೀರ್ ಸಿಗ್ತದೆ

ಅಪ್ಪ ಅಮ್ಮ ಬದ್ಕಿರೋ ತನಕ ಕೀಳಾಗ್ ಕಾಣ್ತಾರೆ

ಸತ್ತೋದ್ ಮ್ಯಾಗೆ ಶ್ರಾದ್ಧಾ ಮಾಡಿ ಭಕ್ತಿ ತೋರ್ತಾರೆ

ಅವರ್ನೆಲ್ಲ ಕಾಗೆ ಮಾಡಿ ಕೂಳ್ ಹಾಕ್ತಾರೆ, ಅಹ್ಹಹ್ಹಹ್ಹಾ...  ದ್ಯಾವ್ರೇ

ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು, ಎಲ್ಲಿ ಕುಂತಿದ್ದೀ...

ಎಲ್ಲಾರ್ನ್ ಕಾಯೋ ದ್ಯಾವ್ರೇ


ಬೇಸಾಯ್ದ್ ಬದುಕು ಬ್ಯಾಡ್ದೇ ಹೋದ್ರು ಭೂಮೀಲ್ ಪಾಲ್ಬೇಕು

ಬೆವರು ಮಾತ್ರ ಸುರೀಬಾರ್ದು ಭಾಗ್ಯ ಮಾತ್ರ ಬೇಕು

ಬೇಸಾಯ್ದ್ ಬದುಕು ಬ್ಯಾಡ್ದೇ ಹೋದ್ರು ಭೂಮೀಲ್  ಪಾಲ್ಬೇಕು

ಬೆವರು ಮಾತ್ರ ಸುರೀಬಾರ್ದು ಭಾಗ್ಯ ಮಾತ್ರ ಬೇಕು

ಉತ್ತು ಬಿತ್ತು ಬೆಳೆಯೋನ್ಗಲ್ವೆ ಸೇರ್ಬೇಕಾದ್ದು ಭೂಮಿ

ದುಡಿಯೋನಲ್ವೆ ಒಡೆಯ ಇನ್ನು ನೀನೇ ಹೇಳು ಸ್ವಾಮಿ, ದ್ಯಾವ್ರೇ

ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು, ಎಲ್ಲಿ ಕುಂತಿದ್ದೀ

ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ....

ಎಲ್ಲಾರ್ನ್ ಕಾಯೋ ದ್ಯಾವ್ರೇ


ಯಾಕೋ..ಇತ್ತೀಚೆಗೆ ದಲಿತರು ದೇವಾಲಯ ಪ್ರವೇಶ ನಿಷಿದ್ದದ ಅಡಿಯಲ್ಲಿ ದಂಡ ವಿಧಿಸುವ,ಅಸ್ಪೃಶ್ಯತೆ ಆಚರಿಸುವ ಸುದ್ದಿಗಳು ಹೆಚ್ಚಾಗುತ್ತಲೇ ಇರೋದನ್ನ ನೋಡಿ..ಈ ಹಾಡನ್ನ ಹಂಚಿಕೊಳ್ಳೋ ಆಸೆಯಾಯ್ತು.ಇಂದಿ ಜಾತಿಮನಸಿನ ಮನುಷ್ಯರಿಗೆ ಹೇಳಿ ಬರೆಸಿದಂತಿರುವ ಈ ಹಾಡನ್ನ, ಜಾತಿ ಭೇಧ ಮಾಡುವ ಮುಠ್ಠಾಳರಿಗೆ  ಪದೆ ಪದೇ ಕೇಳಿಸಬೇಕು ಅನ್ನಿಸ್ತು..!


  ಅಬ್ಬಾ..! ಅದೆಂತಹ ಸಾತ್ವಿಕ ಸಿಟ್ಟಿನ ಮೂಲಕ ದೈವವನ್ನ ವಿಡಂಬನೆ ಮಾಡುತ್ತ,ಪ್ರೀತಿಯ ರೋಷದಿಂದ ಟೀಕಿಸುವ ಸಾಹಿತಿ ಗೀತಪ್ರಿಯರ ಈ ಹಾಡು ಸದಾ ಮರೆಯಲಾಗದ ಹಾಡು.


  ಈ ಭೂಮಿ ಮೇಲೆ ಕಣ್ಣಿಗೆ ಕಾಣಿಸದೇ ಸದಾ ಎಲ್ಲಾ ತರದ ಜನರಿಂದ ಟೀಕಿಸಿಕೊಳ್ಳುತ್ತಿರುವ,ಹೊಗಳಿಸಿಕೊಳ್ಳುತ್ತಿರುವ ಏಕೈಕ ಶಕ್ತಿ ಎಂದರೆ ಅದು "ದೇವರು!"

ಪ್ರೇಮ ವಿಫಲವಾದ ಪ್ರೇಮಿಗಳು,ಬದುಕಿನಲಿ ನೊಂದವರು,ಬಡವಾದ ರೈತ..ಹೀಗೆ ಎಲ್ಲರಿಂದಲೂ ಎಲ್ಲದಕೂ ಕಾರ್ಯ ಕಾರಣಕರ್ತ ಎಂದು ಉಬ್ಬಿಸುತ್ತಲೇ ನಿಂದಿಸಿಕೊಳ್ಳುವವ "ದೇವರು"

ತಮಗೆ ಸಂತೋಷವಾದರೆ ಅದಕ್ಕೆ ದೇವರೇ ಕಾರಣ,ತಮಗೆ ದುಃಖವಾದರೆ,ನೋವಾದರೆ..ಹೀಗೆ ಎಲ್ಲದಕ್ಕೂ ಕಾತಣ ಎಂದು ನಂಬುವ ಆಸ್ತಿಕ ಮತ್ತು ನಾಸ್ತಿಕರಿಗೆ ಸುಲಭವಾಗಿ ಸಿಗುವ ಶಕ್ತಿ ಈ "ದೇವರು" ಎಂಬ ಪ್ರತಿಮವೇ.


  ಹುಟ್ಸಿದ್ದ ದೇವರು ಹುಲ್ನಾದ್ರೂ ಮೆಯ್ಸಲ್ವ? ಈ ಭೂಮಿ ಮೇಲಿನ ಒಂದೊಂದು ಅಣುವಿನ ಚಲನೆಗೂ ಈ ದೇವರೇ ಕಾರಣವೆಂದು ನಂಬಿದ ಮೇಲೆ ಎಲ್ಲದಕ್ಕೂ ಅವನ ಮೇಲೆ ದಾಳಿ ಮಾಡಿ ಟೀಕಿಸುತ್ತಾ,ಹೊಗಳುತ್ತಾ ಸಮಾಧಾನಪಟ್ಟುಕೊಳ್ಳುವ ಜಾಯಮಾನ ಈ ನರಪ್ರಾಣಿಯದು..!


    ಇಷ್ಟಾದರೂ ಭಕ್ತರ ಮೊರೆಗಾಗಲಿ,ನಿಂದಕರ ಟೀಕೆಗಾಗಲಿ ಎದ್ದು ಬಂದು ಉತ್ತರ ನೀಡಿದ ಪ್ರತ್ಯಕ್ಷ ಉದಾಹರಣೆ ಇಲ್ಲದಿದ್ದರೂ,ಕಥೆ,ಪುರಾಣ ನಂಬಿಕೆಗಳಲ್ಲಿ ಮಾತ್ರ ದೇವರ ಅಸ್ತಿತ್ವ ಇದೆ ಎಂದು ನಂಬುವ ಅಪಾರಭಕ್ತಿ ಆಸ್ತಿಕನದಾದರೆ,ದೇವರೆಂಬುದು ಇಲ್ಲವೇ ಇಲ್ಲ ಇದೊಂದು ದುರ್ಬಲರ ಹದ್ದುಬಸ್ತಿ ನಲ್ಲಿಡಲು ಕೆಲವರು ಮಾಡಿದ ಹುನ್ನಾರ ಎಂಬುದು ನಾಸ್ತಿಕನ ಉವಾಚ.


        ಹೀಗೆ ನಾಸ್ತಿಕ ಆಸ್ತಿಕರ ನಡುವೆ ದಿನನಿತ್ಯ ನಡೆಯುವ ಸಂಘರ್ಷಕ್ಕೆ ಏನೊಂದು ಪರಿಹಾರನ್ನು ನೀಡದ ದೇವರು ಮಾತ್ರ ತೆರೆಯ ಮರೆಯಲ್ಲೇ "ದೊರೆ"  ಯಂತೆ ವಿರಾಜಮಾನ..!

"ದೇವರೇ ನೀನು ನಿಜವಪ್ಪ" ಎಂದು ಆಸ್ತಕಿ ಹೇಳಿದರೆ,ನಾಸ್ತಿಕನ ವಾದ.."ಸುಳ್ಳೇ ಸುಳ್ಳು ಈ ಭೂಮಿ ಮೇಲೆ ಎಲ್ಲಾ ಸುಳ್ಳು.." ಎನ್ನುತ್ತಾ ವಾದ- ವಿವಾದದಲಿ ಸಮಾಜದಲ್ಲಿ ಮುಳುಗಿದ್ದರೆ..

ಇದರ ನಡುವೆ ದೇವರಿಗೊಂದು ಗುಡಿ ಕಟ್ಟಿ  ಅದನ್ನ ಗುತ್ತಿಗೆ ಪಡೆದವರಂತೆ ಅಸ್ಪೃಶ್ಯತೆ ಆಚರಿಸುತ್ತಾ,"ದೇವರ ದೃಷ್ಠಿಯಲ್ಲಿ ಎಲ್ಲರೂ ಸಮಾನರು" ಎಂಬ ಮಾತಿಗೆ ವಿರುದ್ದವಾಗಿ  ದೇವರಿಗೆ ತಿರುಮಂತ್ರ ಹಾಕುತ್ತಾ,ದೇವರ ಹೆಸರಿನಲ್ಲಿ ಸುಲಿಗೆ ಮಾಡುತ್ತಾ,ಅತ್ಯಾಚಾರ,ಅನಾಚಾರದಲ್ಲಿ ತೊಡಗಿರುವ ಮಂದಿಯ ಕ್ಷೋಭೆ ಇತ್ತೀಚೆಗೆ ಅವ್ಯಾಹತವಾಗಿದೆ.


  ಇಂತಹ ಜಾತಿಯುಕ್ತ ಭಾರತದ ಈ ಸಮಾಜದ ಅಸಮಾನತೆ ಕಂಡು "ಬೆಳುವಲದ ಮಡಿಲಲ್ಲಿ" ಚಿತ್ರದ ಹಾಡೊಂದು ಕಾಡಿಸಿ ನೆನಪಾಯ್ತು.ಆ ಹಾಡಿನ ನಾಲ್ಕು ಸಾಲು ಬರೆದು ಪೋಸ್ಟ್ ಮಾಡುವ ಎಂದುಕೊಂಡು ಕುಳಿತ ನನಗೆ ಒಂದರ ಹಿಂದೊಂದರಂತೆ ಇಂತಹ ಹಾಡುಗಳು ನೆನಪಾಗುತ್ತಾ ಹೋದವು.ಹಾಗಾದರೆ ಈ ಕುರಿತು ಒಂದು ಸುಧೀರ್ಘ "ಗಾನಗಣಿಗಾರಿಕೆ" ಯಾಕೆ ಬರೆಯಬಾರದೆಂದವನಿಗೆ ಸಾಕ್ಷಿ ಈ ಲೇಖನಮಾಲೆ.


       45 ವರ್ಷದ ಹಿಂದೆಯೇ ಗೀತಪ್ರಿಯರು ಈ ಸಮಾಜದ ಓರೆ,ಕೋರೆಗಳನ್ನ ಕಂಡು,ಅಸಮಾನತೆ,ಅಸ್ಪೃಶ್ಯತೆ ಕಂಡು ,ತನ್ನ ಸಿನಿಮಾ ಮತ್ತು ಹಾಡಿನ ಮೂಲಕ ವಿರೋಧದ ದನಿ ಎತ್ತಿರುವುದು ನಿಜಕ್ಕೂ ಗ್ರೇಟ್ ಎನಿಸುತ್ತದೆ.

ಹೌದು..ತಾನೊಬ್ಬ ಸಮಾಜದ ಅನಾರೋಗ್ಯಕೆ ಹೇಗೆ ತಾನೆ ಚಿಕಿತ್ಸೆ ನೀಡಲು ಸಾಧ್ಯ? ಎಂದು ಕೂರದೇ,ತನ್ನ ಚಿತ್ರ,ಸಾಹಿತ್ಯದ ಮೂಲಕ ಸಮಾಜದ ಅವ್ಯವಸ್ತೆಯನ್ನ ಖಂಡಿಸುವ ಮನಸ್ಥಿತಿಗೆ ಭೇಷ್ ಎನ್ನಲೇಬೇಕು.


    ಅದರಲ್ಲೂ ದೇವರ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯ,ಅಧರ್ಮ,ಅನಾಚಾರಕ್ಕೆಲ್ಲಾ ಗುಡಿಯೊಳಗಿನ ದೇವರನ್ನೇ ಕಾರಣವಾಗಿಸುವ ದುಷ್ಠರ ಮನೋವ್ಯಾಧಿ ಕಂಡು ಆ ಕಾಣದ ದೇವರನ್ನೇ ಪ್ರಶ್ನೆ ಮಾಡುವಂತೆ ಬರೆದ ಈ ಹಾಡು,ಪ್ರತಿಯೊಬ್ಬ ನೊಂದವರ ಮನಸಿನ ಕನ್ನಡಿಯಂತಿದೆ.ಪ್ರತಿಯೊಬ್ಬರಿಗೂ ನೇರವಾಗಿ  ಹೇಳಲಾಗದೇ ತನ್ನ ಪರಿಣಾಮಕಾರಿ ಸಿನಿಮಾ ಮಾಧ್ಯಮದ ಮೂಲಕ ಹೇಳುವ ಇವರ ನೊಂದ ಮತ್ತು ರೋಷದ,ಸಿಟ್ಟಿನ ದನಿ ಬಹುವಾಗಿ ಇಷ್ಟವಾಗುತ್ತದೆ.


  ಇಲ್ಲಿ ಗೀತಪ್ರಿಯರ ಸಾಹಿತ್ಯದ ಬಗ್ಗೆ ಹೇಳಲೇಬೇಕಾದ ಮತ್ತೊಂದು ವಿಷಯ ಎಂದರೆ: 1956 ರಲ್ಲಿ ವೈ.ವಿ.ರಾವ್ ನಿರ್ದೇಶನದಲ್ಲಿ ತೆರೆಗೆ ಬಂದ "ಭಾಗ್ಯಚಕ್ರ" ಎಂಬುವ ಸಿನಿಮಾದಲ್ಲೂ ಕೂಡಾ "ಎಲ್ಲಾರ್ ಕಾಯೋ.." ಹಾಡು ಬರೆಯುವ ಇಪ್ಪತ್ತು ವರ್ಷದ ಹಿಂದಯೇ ಈ ವ್ಯವಸ್ಥೆಯ ವಿರುದ್ದ ದೇವರನ್ನ ಪ್ರಶ್ನೆ ಮಾಡಿ ಹಾಡೊಂದನ್ನ ಬರೆದಿದ್ದರು.ವಿಜಯಭಾಸ್ಕರ್ ಸಂಗೀತದಲ್ಲಿ ಘಂಟಸಾಲ ರ ದನಿಯಲ್ಲಿ "ದೇವ ನಿನ್ನ ಲೋಕದ ನ್ಯಾಯವಿದೇನಾ? ನ್ಯಾಯವಿದೇನಾ? ಎಂಬ ಹಾಡು ಕೂಡಾ ಅಂದಿನ‌ಕಾಲದಲ್ಲೇ ಬಹಳ ಜನಪ್ರಿಯ ಹಾಡಾಗಿತ್ತು.ಈ ಭುಮಿ ಮೇಲಿನ ಬಡತನ,ಸಿರಿತನ,ಅನ್ಯಾಯ,ಅಕ್ರಮ ಗಳನ್ನ ಕಣ್ಣಾರೆ ಕಂಡು ಬರೆದ ಈ ಹಾಡಿಗೆ ಅಂದು ವಿಧಾನಸೌಧ ನಿರ್ಮಣ ಮಾಡುತಿದ್ದ ಕೂಲಿಕಾರ್ಮಿಕರ ಬವಣೆ ಕಾರಣವಾಗಿತ್ತು..!


 " ದೇವ ನಿನ್ನ ರಾಜ್ಯದ ನ್ಯಾಯವಿದೇನಾ?

ನ್ಯಾಯವಿದೇನಾ?

ಲೋಕಕೆಲ್ಲ ಒಬ್ಬ ಸೂರ್ಯ, ಒಬ್ಬನೆಯೆ ಚಂದಿರ

ಎಲ್ಲರಿಗೂ ಒಂದೇ ಭೂಮಿ

ಇರುವುದೊಂದೆ ಅಂಬರ

ಆದರೇಕೆ ಜಗದಲಿ

ಭೇದ ಭಾವನ..ಭೇಧ ಭಾವನ..!?


 ಬಡವರ ಈ ಗೋಳನೋಡಿ

ಗುಡಿಗಳಲಿ ಅವಿತೆಯಾ?

ಕಲ್ಲು ಮಾಡಿ ಹೃದಯವ ಕಲ್ಲಾಗಿ

ಕುಳಿತೆಯಾ?

ಮರೆತೆಯೇನು ಬಡವರ 

ಶೋಕ ಜೀವನ ಶೋಕಜೀವನ?


ತುಂಬಿಹುದು ಸುತ್ತಲೂ ಪಾಪಿಗಳ

ಪಂಗಡ/ಪಾಪಿಗಳ ಪಂಗಡ

ವಂಚನೆಯು ಮುತ್ತಿರಲು

ಸ್ವಾರ್ಥತೆಯ ಸಂಗಡ

ಆ ಲೋಕದಲ್ಲಿ ಎತ್ತಲೂ

ಕತ್ತಲೆಯೇನಾ?/ಕತ್ತಲೆಯೇನಾ?


  ನಿಜಕ್ಕೂ ಈ ಸಾಲುಗಳಲ್ಲಿ ಗೀತಪ್ರಿಯಾರ ಆರ್ದ್ರತೆಯ ಭಾವ,ಸಮಾಜದ ಹಿತ ಚಿಂತನೆಯ ಕಳಕಳಿ ಎದ್ದು ಕಾಣುತ್ತದೆ.


ಭಾರತೀಯ ಸಂಸ್ಕøತಿ, ಪರಂಪರೆ, ಶ್ರಮಜೀವಿಗಳು, ಮಣ್ಣಿನ ಮಕ್ಕಳ ಬಗೆಗೆ ಅಪಾರ ಕಾಳಜಿ. ಸೈನಿಕ ಕುಟುಂಬದಿಂದ ಬಂದ ಕಾರಣ, 'ಜೈ ಜವಾನ್ ಜೈ ಕಿಸಾನ್' ಕಲ್ಪನೆಗೆ ಒತ್ತು ಕೊಡುವುದು ಇವರ ಚಿತ್ರಗಳಲ್ಲಿನ ವಿಶೇಷ. 'ಗೀತಪ್ರಿಯ' ಚಿತ್ರಗಳಲ್ಲಿನ ನಾಯಕ. ಉನ್ನತ ಭಾರತೀಯ ಮೌಲ್ಯಗಳ ಪ್ರತಿವಾದಕ, ಹಿಂಸೆಯಿಂದ ದೂರ, ನ್ಯಾಯಪರ, ನಾಯಕಿಯೂ ಅಷ್ಟೇ, ಆದರ್ಶ ನಾರಿ. ಉತ್ತಮ ಮೌಲ್ಯಗಳನ್ನು ತಮ್ಮ ನಿರ್ದೇಶನದ ಚಿತ್ರಗಳಲ್ಲಿ ಕಾಪಾಡಿಕೊಂಡು ಬಂದಿದ್ದಾರೆ.  ತಮ್ಮ ಸಂಭಾಷಣೆ ಹಾಗೂ ಹಾಡುಗಳಲ್ಲಿ ಆಡುಭಾಷೆಯಲ್ಲಿನ ಸೊಗಸನ್ನು ತುಂಬಿದವರು. ``ಭಗವಂತ ಕೈಕೊಟ್ಟ-ಯಾಕೆ,? ದುಡಿಯೋಕಂತಾ....... ಅದನ್ಯಾಕೆ ಎತ್ತುವೆ ಹೊಡಿಯೋಕಂತಾ......... ಎಂಬಂಥ ಲಲಿತಶೈಲಿ ಅವರದು.  ಈ ಬಗೆಯ ಸಾಹಿತ್ಯದಿಂದಾಗಿ ಪ್ರೇಕ್ಷಕ ಸಮುದಾಯಕ್ಕೆ ತೀರ ಹತ್ತಿರವಾದರು. ಗೀತಪ್ರಿಯ ಅವರ ಸಾಹಿತ್ಯ, ವಿಜಯಭಾಸ್ಕರ್ ಅವರ ಸಂಗೀತ ಹಾಲು-ಜೇನಿನಂತೆ ಬೆರೆಯುತ್ತಿದ್ದುದು ವಿಶೇಷ. 300ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ.


   " ಭಗವಂತ ಕೈ ಕೊಟ್ಟ..' ಎನ್ನುವ ಹಾಡು ರೇಡಿಯೋದಲ್ಲಿ ಬಂದಾಗ,ಮತ್ತು ಕೆಲವೊಮ್ಮೆ ನಾವು ಯಾರ ಮೇಲಾದರೂ ಕೈ ಮಾಡಿದಾಗ,ಒದೆಯುವಾಗ ನಮ್ಮಪ್ಪ ಈ ಹಾಡಿನ ಮೂಲಕ ನಮಗೆ ಉಗಿದು ಬುದ್ದಿ ಹೇಳುತಿದ್ದದು ನೆನಪಾಗುತ್ತಿದೆ.


     ಹೀಗೆ ಮುಂದೆ ಸ್ವತಃ ಚಿತ್ರ ನಿರ್ದೇಶನಕ್ಕೆ ಇಳಿದಾಗಲೂ,ಇವರ ಸಮಾಜದ ಅವ್ಯವಸ್ಥೆಯ ವಿರುದ್ದದ ಸಿಟ್ಟು,ಸೆಡವು,ಕೋಪ ಕಡಿಮೆಯಾಗಿರಲಿಲ್ಲ, ಎಂಬುದಕ್ಕೆ 'ಬೆಳುವಲದ ಮಡಿಲಲ್ಲಿ' ಚಿತ್ರದ " ಎಲ್ಲಾರ್ ಕಾಯೋ.." ಹಾಡೇ ಸಾಕ್ಷಿ.ಬೇಕಾದರೇ ಈ ಎರಡು ಹಾಡನ್ನ ಕೇಳುತ್ತಾ ಹೋಗಿ ನಿಮಗೆ "ಗೀತಪ್ರಿಯ" ರ ಸಾಮಾಜಿಕ ಕಳಕಳಿ ಇಷ್ಟವಾಗದೇ ಇರದು.

ತಮ್ಮ ಮೊದಲ ಚಿತ್ರ ಮಣ್ಣಿನ ಮಗದಲ್ಲೂ ನಾಯಕಿಯ ಮೂಲಕ ಈ ಸಮಾಜದ ವ್ಯವಸ್ಥೆಯನ್ನ ಪ್ರಶ್ನಿಸುವ ಹಾಡೊಂದು ರಚಿಸಿದ್ದರು.

"ಇದೇನಾ ಸಭ್ಯತೆ ?ಇದೇನಾ ಸಂಸ್ಕೃತಿ?

ಎಂದು ನೊಂದು ಕೇಳುತಿಹಳು

ನಮ್ಮ ತಾಯಿ ಭಾರತಿ."


 ಈ ಹಾಡು ಪ್ರತಿಯೊಬ್ಬ ಭಾರತೀಯನನ್ನ ಪ್ರಶ್ನೆ ಮಾಡುವಂತಿದ್ದ ಈ ಸಾಹಿತ್ಯದಲ್ಲಿ ಜನಪರ,ಸಮಾಜಮುಖಿ ಚಿಂತನೆ ಗೀತಪ್ರಿಯರಿಗಿತ್ತು ಎಂಬುದನ್ನ ಕಾಣಬಹುದು.


   ಇಲ್ಲಿ ಮತ್ತೊಂದು ನೆನಪಾಗುವುದೆಂದರೆ;1973 ರಲ್ಲಿ "ತ್ರಿವೇಣಿ" ಎಂಬ ಚಿತ್ರದಲ್ಲಿ ಇಂದಿನ ನಾದಬ್ರಹ್ಮ ಹಂಸಲೇಖ ಬರೆದ ಮೊದಲ ಹಾಡು ಕೂಡಾ ದೇವರನ್ನೇ ಪ್ರಶ್ನಿಸಿ ಬರೆದ ಹಾಡಾಗಿತ್ತು ಎಂಬುದು.


ಆರ್ಕೆಸ್ಟ್ರಾ ,ನಾಟಕಗಳಲ್ಲಿ ತನ್ನ ಬದುಕು ಕಟ್ಟಿಕೊಳ್ಳಲು ಹೆಣಗಾಡುತಿದ್ದ ಗಂಗರಾಜು ಅಲಿಯಾಸ್ ಹಂಸಲೇಖ ತನ್ನ ಬಡತನಕ್ಕೆ ಆ ದೇವರೇ ಕಾರಣ ಎಂದು ಟೀಕಿಸಿ ಮೊದಲ ಗೀತಡಯಲ್ಲೇ ತನ್ನೆಲ್ಲಾ ನೋವನ್ನ ಹೊರಹಾಕಿದ್ದರು."ನೀನಾ ಭಗವಂತ" ಎಂದು ಬರೆದ ಈ ಹಾಡು ಸ್ವತಃ ಹಂಸಲೇಖ ಸೋದರ ಬಾಲಕೃಷ್ಣ ಹಾಡಿದ್ದರು.ನಂತರ ಹಿರಿಯ ಹಿತೈಷಿಯೊಬ್ಬರ ಸಲಹೆಯಂತೆ ಮೊದಲಿಗೆ ಟೀಕಿಸುವ ಹಾಡನ್ನ ಬಿಟ್ಟು ,ಬೇರೆಯ ಹಾಡುಗಳಲ್ಲಿ ತೊಡಗಿಸಿಕೊಂಡ ಹಂಸಲೇಖರು ಇಂದು ಚಿತ್ರರಂಗದ ವಿಶ್ವವಿದ್ಯಾಲಯವೇ ಆಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.


 "ಜಗಕುಪಕರಿಸಿ,ನನಗಪಕರಿಸೋ

ಲೋಕೋದ್ದಾರಕ ನೀ‌ನೇನಾ?

ಗೋರ್ಕಲ್ಲಿಗೆ ಗುಡಿ ಮಂದಿರ ನೂರು

ಮಾಡುವ ನರನಿಗೆ ನೆಲೆಯಿಲ್ಲ

ಹೂ ಸೌಗಂಧವ,ಲೇಪಿಸಿ,ಹಾಡಿ

ಕರೆದರೂ ಕರುಣಿಸೆ ಕೃಪೆಯಿಲ್ಲ..

ನೀನಾ...ಭಗವಂತ?


ನಶ್ವರ ಭೋಗದ ಆಸೆ ಕಡಲಲಿ

ತೇಲಿಸಿ ಮುಳುಗಿಸಲೆಕಯ್ಯ?

ಅಂತರ ತಿಳಿಯದೇ ಪಾಲಿಸುವವಗೆ

ದೈವೊತ್ತಮ ಬಿರುದೇಕಯ್ಯ?....."


   ಹೀಗೆ ಉತ್ಕೃಷ್ಠ ಪದಗಳಲಿ ತಮ್ಮ ಜೀವನದ ನೋವುಗಳಿಗೆಲ್ಲಾ ದೇವರೆ ಕಾರಣ ಎಂದು ಪದಗಲ ಮುಲಕ ಪ್ರಶ್ನೆ ಮಾಡಿದ ಹಂಸಲೇಖರ ಈ ಧ್ವನಿ ಎಲ್ಲಾ ನೊಂದವರ ಮುಖವಾಣಿಯ ಹಾಡು ಎಂದರೂ ತಪ್ಪಲ್ಲ.


   ಹೀಗೆ ದೇವರನ್ನ ಪ್ರಶ್ನೆ ಮಾಡುವ ಹಾಡುಗಳಿಗೆ ಉತ್ತರವೇನೋ ಎಂಬಂತೆ 1972 ರಲ್ಲಿ ತೆರೆಗೆ ಬಂದ "ಭಲೆ ಹುಚ್ಚ" ಚಿತ್ರದ ಹಾಡು ಸೃಷ್ಠಿಯಾಗಿತ್ತು.ಈ ಹಾಡು ರಚಿತವಾಗಿದ್ದು ವಿಜಯನಾರಸಿಂಹರಿಂದ.ಅದೂ ಒಬ್ಬ "ಹುಚ್ಚ" ನ ಪಾತ್ರಧಾರಿಯ ಮೂಲಕ ದೇವರ ಕುರಿತ ಮೇಲಿನ ಪ್ರಶ್ನೆಗಳಿಗೆಲ್ಲಾ ಚಮತ್ಕಾರಿಕ ಉತ್ತರ ನೀಡಿದ ಪರಿ ನಿಜಕ್ಕೂ ಗಮನಸೆಳೆಯುತ್ತದೆ.

ಅಣ್ಣಾವ್ರ ಅಭಿನಯದಲ್ಲಿ ದೇವರ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನೆಲ್ಲಾ ಅನಾವರಣ ಮಾಡುವ ಪರಿ ನಿಜಕ್ಕೂ ಬಹಳ ಇಷ್ಟವಾಗುತ್ತದೆ.



ಭಲೇ ಹುಚ್ಚ (1972) - ಕಲ್ಲಾದೆ ಏಕೆಂದು ಬಲ್ಲೆ  ಶಿವನೆ ಕಲ್ಲಾದೆ ಏಕೆಂದು ಬಲ್ಲೆ

ಸಾಹಿತ್ಯ: ವಿಜಯನಾರಸಿಂಹ   ಸಂಗೀತ: ರಾಜನ್-ನಾಗೇಂದ್ರ  ಹಾಡಿದವರು: ಪಿ.ಬಿ.ಶ್ರೀನಿವಾಸ್


ಕಲ್ಲಾದೆ ಏಕೆಂದು ಬಲ್ಲೆ  ಶಿವನೆ ಕಲ್ಲಾದೆ ಏಕೆಂದು ಬಲ್ಲೆ

ಆ ಗುಟ್ಟನ್ನು ಹೇಳಲೇನು ಇಲ್ಲೆ

ಕಲ್ಲಾದೆ ಏಕೆಂದು ಬಲ್ಲೆ

ಆ ಗುಟ್ಟನ್ನು ಹೇಳಲೇನು ಇಲ್ಲೆ


ಅತಿಯಾಸೆ ತುಂಬಿರುವ ಜನಗಳ ರೀತಿ

ಲಂಚ ತೋರಿಸುತ ಬೇಡುತಿಹ ಭಕುತರ ನೀತಿ

ಈ ಪಾಪಿಗಳ ಕೈಗೆ ಸಿಕ್ಕಿ ನರಳುವ ಭೀತಿ, ಅಲ್ವೇ

ಕಲ್ಲಾದೆ ಏಕೆಂದು ಬಲ್ಲೆ  ನೀ ಕಲ್ಲಾದೆ ಏಕೆಂದು ಬಲ್ಲೆ

ಆ ಗುಟ್ಟನ್ನು ಹೇಳಲೇನು ಇಲ್ಲೆ


ಮನಸೆಲ್ಲೋ ಕಣ್ಣೆಲ್ಲೋ ಪೂಜೆ ಎನುವರು

ನಿನಗೆ ನೈವೇದ್ಯ ಎಂದೆಲ್ಲ ತಾವೆ ತಿನುವರು

ಮನಸೆಲ್ಲೋ ಕಣ್ಣೆಲ್ಲೋ ಪೂಜೆ ಎನುವರು

ನಿನಗೆ ನೈವೇದ್ಯ ಎಂದೆಲ್ಲ ತಾವೆ ತಿನುವರು

ನೀ ಬಂದು ರುಚಿ ನೋಡು ಒಮ್ಮೆಯಾದರೂ

ಆಗ ಗುಡಿಯಿಂದ ನಿನ್ನನ್ನೇ ಅಟ್ಟಿ ಬಿಡುವರು

ಕಲ್ಲಾದೆ ಏಕೆಂದು ಬಲ್ಲೆ  ಶಿವನೆ ಕಲ್ಲಾದೆ ಏಕೆಂದು ಬಲ್ಲೆ

ಆ ಗುಟ್ಟನ್ನು ಹೇಳಲೇನು ಇಲ್ಲೆ


ನೂರಾರು ಕಥೆ ಬರೆದು ಹೇಳುವರಲ್ಲ

ನಿನಗೆ ತಮ್ಮಂತೆ ಸತಿಸುತರ ಕಟ್ಟಿಹರಲ್ಲ

ನೂರಾರು ಕಥೆ ಬರೆದು ಹೇಳುವರಲ್ಲ

ನಿನಗೆ ತಮ್ಮಂತೆ ಸತಿಸುತರ ಕಟ್ಟಿಹರಲ್ಲ

ನಿನ್ನ ಹೆಸರಲ್ಲಿ ಸುಲಿಗೆಯನು ಮಾಡುವರಲ್ಲ

ನಿನ ಕಂಡು ಅಯ್ಯೊ ಪಾಪ ಎನುತಿದೆಯಲ್ಲ

ಕಲ್ಲಾದೆ ಏಕೆಂದು ಬಲ್ಲೆ ಶಿವನೆ ಕಲ್ಲಾದೆ ಏಕೆಂದು ಬಲ್ಲೆ

ಆ ಗುಟ್ಟನ್ನು ಹೇಳಲೇನು ಇಲ್ಲೆ

ಅತಿಯಾಸೆ ತುಂಬಿರುವ ಜನಗಳ ರೀತಿ


ಲಂಚ ತೋರಿಸುತ ಬೇಡುತಿಹ ಭಕುತರ ನೀತಿ

ಈ ಪಾಪಿಗಳ ಕೈಗೆ ಸಿಕ್ಕಿ ನರಳುವ ಭೀತಿ

ಕಲ್ಲಾದೆ ಏಕೆಂದು ಬಲ್ಲೆ ಆ ಗುಟ್ಟನ್ನು ಹೇಳಲೇನು ಇಲ್ಲೆ

---------------------------------------------------------


 ನಾಲ್ಕು ಸಾಲು ಬರೆಯಲು ಕುಳಿತವಗೆ ಈ ಧೀರ್ಘ ಗಾನಗಣಿಗಾರಿಕೆ ಮಾಡುವಂತಾಯ್ತು.


  ಗಾನಾಸುಮಾ ಪಟ್ಟಸೋಮನಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಗಾನಗಣಿಗಾರಿಕೆ

 #ಮೊನ್ನೆ_ಹಂಸಲೇಖರು_ನೀಡಿದ #ಗಾನಕರುಹು_ಬೆನ್ನತ್ತಿ_ಹೊರಟ #ಗಾನಶಿಕಾರಿ_ಗಾನಗಣಿಗಾರಿಕೆ #ಯಲ್ಲಿ_ಸೆರೆಯಾಯ್ತು...!!!   ಮೊನ್ನೆ ಎಸ್.ಪಿ‌.ಬಾಲಸುಬ್ರಮಣ್ಯಂ ನಿಧನರಾದಾಗ ಕನ...