ಮಂಗಳವಾರ, ಸೆಪ್ಟೆಂಬರ್ 27, 2022

ಗಾನಗಣಿಗಾರಿಕೆ





 #ಮೊನ್ನೆ_ಹಂಸಲೇಖರು_ನೀಡಿದ

#ಗಾನಕರುಹು_ಬೆನ್ನತ್ತಿ_ಹೊರಟ

#ಗಾನಶಿಕಾರಿ_ಗಾನಗಣಿಗಾರಿಕೆ #ಯಲ್ಲಿ_ಸೆರೆಯಾಯ್ತು...!!!


  ಮೊನ್ನೆ ಎಸ್.ಪಿ‌.ಬಾಲಸುಬ್ರಮಣ್ಯಂ ನಿಧನರಾದಾಗ ಕನ್ನಡ ನಾಡಿನ ದೇಸಿದೊರೆ ನಾದಬ್ರಹ್ಮ ಹಂಸಲೇಖ ರವರು ಪತ್ರಿಕಾಗೋಷ್ಠಿಯಲ್ಲಿ ಗದ್ಗದಿತರಾಗಿ ಮಾತನಾಡುತ್ತಾ..ಮಧ್ಯೆ ಒಂದು ಹಾಡಿನ ಬಗ್ಗೆ ಮಾತನಾಡಿದ್ದನ್ನ ಯಾರೂ ಅಷ್ಟಾಗಿ ಗಮನಿಸಲಿಲ್ಲ ಅನ್ಸುತ್ತೆ.


     ಅಂದು ಎಸ್.ಪಿ‌.ಬಾಲಸುಬ್ರಹ್ಮಣ್ಯಂ ರಿಗೆ "ಗಾನಯೋಗಿ ಪಂಚಾಕ್ಷರಿ ಗವಾಯಿ "ಚಿತ್ರದ ಹಾಡು ರಾಷ್ಟ್ರೀಯ ಪ್ರಶಸ್ತಿಗೆ  ಆಯ್ಕೆ ಮಾಡುವ ಹೊತ್ತಲ್ಲಿ "ಬಾಂಬೆ " ಸಿನಿಮಾದ ಹಾಡು ತುಂಬಾ ಪೈಪೋಟಿ ನೀಡಿ, ಪ್ರಶಸ್ತಿ ಯ ಮುಂಚೂಣಿಯಲ್ಲಿದ್ದಾಗ ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಪಿ‌.ಬಿ.ಶ್ರೀನಿವಾಸ್, ಹಂಸಲೇಖರ ಪ್ರತಿಭೆ ಬಗ್ಗೆ ಬಹಳವಾಗಿ ಅರಿವು ಮೂಡಿಸುತ್ತಾರೆ.ಹಾಗು ಪ್ರಬಲವಾಗಿ ಹಂಸಲೇಖ ಹಿಂದೂಸ್ಥಾನಿ ಸಂಗೀತದ ಈ ಹಾಡಿಗೆ ಪ್ರಶಸ್ತಿ ನೀಡುವ ಬಗ್ಗೆ ಒತ್ತಾಯಿಸುತ್ತಾರೆ.

ಪಿ.ಬಿ.ಶ್ರೀನಿವಾಸ್, "ಅವರೊಬ್ಬ ಹಳ್ಳಿಯಿಂದ ಬಂದ ಅಗಾಧಪ್ರತಿಭೆ,ಆತ ಮಾಡಿರುವ ಹಿಂದೂಸ್ಥಾನಿ ಸಂಗೀತದ ಈ ಹಾಡನ್ನ ಪ್ರಶಸ್ತಿ ಗೆ ಆಯ್ಕೆ ಮಾಡಿ ಅಂತಾ ಒತ್ತಾಯ ಮಾಡುತ್ತಾರೆ.ಸಮಿತಿ ಅಧ್ಯಕ್ಷ ಹೃಷಿಕೇಶ್ ಮುಖರ್ಜಿ.."ಯಾರು ಈ ಹಂಸಲೇಖ ?ಎಂದಾಗ,ಪಿ.ಬಿ.ಶ್ರೀನಿವಾಸ್,"ಹಿಂದೊಮ್ಮೆ ಅಂದರೆ 1996 ರಲ್ಲಿ ಹಂಸಲೇಖರ ಒಂದು ಹಾಡಿಗೆ ರಾಷ್ಟಪ್ರಶಸ್ತಿ ಕೇವಲ ಆ ಹಾಡಿನ ಇಂಗ್ಲೀಷ್ ಅನುವಾದ ಇಲ್ಲದೆ, ಸಮಿತಿ ಸದಸ್ಯರಿಗೆ ಅರ್ಥ ಮಾಡಿಸಲಾಗದೇ  ವಂಚಿತವಾಗಿತ್ತಲ್ಲ.ಆ ಪ್ರತಿಭೆಯೇ ಹಂಸಲೇಖ" ಎನ್ನುತ್ತಾರೆ.


  ಆದರೆ ಆ ಹಾಡು ಯಾವುದು? ಅದು ಯಾವ ಚಿತ್ರದ ಹಾಡು? ಪ್ರಶಸ್ತಿ ವಂಚಿತ  ಆ ಹಾಡಿನ ಎದುರು ಪ್ರಶಸ್ತಿ ಬಾಚಿಕೊಂಡ ಸಾಹಿತಿ ಯಾರು? ಎಂದು #ಗಾನಗಣಿಗಾರಿಕೆ  ಒಂದೇ ಸಮನೆ ತಲೆಯೊಳಗೆ ಹುಳ ಬಿಟ್ಟು ಕೂತವನಿಗೆ ಕೊನೆಗೆ ಆ ಪ್ರಶಸ್ತಿ ವಂಚಿತ ಹಾಡು ಸಿಕ್ಕೇಬಿಟ್ಟಿತ್ತು..!


1996 ರಲ್ಲಿ "ಮ" ಕಾರ ಪ್ರಿಯ ಉದ್ಯಮಿ ನಿರ್ಮಾಪಕ ಸಂದೇಶ್ ನಾಗರಾಜು ಅವರ ಪ್ರೀತಿಯ ಗೆಳೆಯ ನಟ ಅಂಬರೀಶ್ ಅಭಿನಯದಲ್ಲಿ ಎಸ್.ಮಹೇಂದರ್ ನಿರ್ದೇಶನದಲ್ಲಿ ಗಂಭೀರ ಚಿತ್ರಕಥೆಯೊಂದನ್ನ "ಮೌನರಾಗ" ಹೆಸರಿನಲ್ಲಿ ತೆರೆಗೆ ತರುತ್ತಾರೆ.ಆ ಚಿತ್ರಕ್ಕೆ ಹಂಸಲೇಖ ಸಂಗೀತ ಮತ್ತು ಸಾಹಿತ್ಯ ಒದಗಿಸುತ್ತಾರೆ.ಆ ಚಿತ್ರದಲ್ಲಿ ಕರುಡು ಪಾತ್ರದ ಹುಡುಗಿಯ ಪ್ರಕೃತಿ ಬಗೆಗಿನ ಮುಗ್ದ ಪ್ರಶ್ನೆಗಳಿಗೆ ತಾಯಿತಂದೆ ತಮ್ಮದೇ ರೀತಿಯಲ್ಲಿ ಕೊಡುವ ವಿಶಿಷ್ಟ ಪ್ರಶ್ನೋತ್ತರ ಹಾಡೇ ಆ ಪ್ರಶಸ್ತಿ ವಂಚಿತ ಹಾಡು.


  "ಅಮ್ಮ ಅಮ್ಮ ಹೇಳಮ್ಮ...ಎಂದು ಆರಂಭವಾಗುವ ಈ ಹಾಡು ಅಂಧ ಮಗುವು ಕೇಳುವ ನೋಡಲಾಗದ ಆ ಮಗುವಿನ ಅನುಭವಕೆ ಬರುವಂತೆ ಬಹಳ ವಿಶಿಷ್ಟ ಭಾಷೆಯಲ್ಲಿ ಬಣ್ಣ,ದೇವರು,ಗಾಳಿ..ಹೀಗೆ ಹಲವು ವಿಷಯಗಳ ಬಗ್ಹೆ ಅರ್ಥೈಸುವಂತೆ ತಿಳಿಸುವ ವಿಶಿಷ್ಟ ಸಾಹಿತ್ಯವನ್ನ ಹಂಸಲೇಖ ರಚಿಸಿದ್ದು,ಆ ಹಾಡಿನ ಅರ್ಥವನ್ನ ಆಂಗ್ಲಭಾಷೆಯಲ್ಲಿ ತರ್ಜುಮೆ ಮಾಡಿ ರಾಷ್ಟಪ್ರಶಸ್ತಿಯ ಆಯ್ಕೆಗೆ ಕಳಿಸದೇ ಪ್ರಶಸ್ತಿಯಿಂದ ವಂಚಿತವಾಗಿ ಮತ್ತೊಂದು ಹಾಡಿಗೆ ಪ್ರಶಸ್ತಿ ದೊರೆಯುವಂತಾಯ್ತು.


-------------------------------

ಚಿತ್ರ- ಮೌನರಾಗ(1996)

ಸಾಹಿತ್ಯ- ಸಂಗೀತ- ಹಂಸಲೇಖ

ಗಾಯನ- ಮನು,ಚಿತ್ರಾ,ಮೋನಿಕಾದತ್


ಅಮ್ಮ ಅಮ್ಮ ಹೇಳಮ್ಮ?

ಬಣ್ಣ ಅಂದರೆ ಏನಮ್ಮ?

ಭಾವಗಳಿಂದಲೇ ಬಾಳಮ್ಮ

ಬಣ್ಣ ಬಣ್ಣ ಅದರ ಮುಖವಮ್ಮ


ಅಪ್ಪ ಅಪ್ಪ ಹೇಳಪ್ಪ?

ಬೆಳಕು ಅಂದರೆ ಎನಪ್ಪ?

ಬೆಂಕಿ ಬೆಳಕೇ ಜಗವಮ್ಮ

ನೋವೇ ಬೆಂಕಿ ನಲಿವೇ ಬೆಳಕಮ್ಮ


ಕತ್ತಲೆ ಎಂದರೆ ಏನಮ್ಮ?

ಬೆಳಕೇ ಇಲ್ಲದ ಜಗವಮ್ಮ

ಲೋಕ ಎಂದರೆ ಎನಪ್ಪ?

ಅಪ್ಪ ಅಮ್ಮ ಮಗುವಮ್ಮ

ಗಾಳಿಯು ಯಾಕೆ ಸುಡದಮ್ಮ?

ಒಂದೆಡೆ ಯಾಕೆ ನಿಲದಮ್ನ?

ಗಾಳಿಗೆ ರೂಪ ಇಲ್ಲಮ್ಮ

ದೇವರ ಮಾಯೆ ಅದು ಅಮ್ಮ

ದೇವರು ಯಾರಮ್ಮ?

ಅವನಿಗೂ ಕುರುಡಮ್ಮ?

ಕುರುಡನು ನಿಜವಮ್ಮ...

ನೋಡಲು ಸಿಗನಮ್ಮ..


ಅಪ್ಪ ಅಪ್ಪ ಹೇಳಪ್ಪ?

ವಿದ್ಯೆ ಅಂದರೆ ಏನಪ್ಪ?

ಕಳುವೇ ಆಗದ ಸಿರಿಯಮ್ಮ

ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ


ಹೂಗಳು ಯಾಕೆ ನಗದಮ್ಮ?

ನಕ್ಕರೂ ಸದ್ದು ಇರದಮ್ಮ

ಕಣ್ಣಲಿ ನೀರು ಯಾಕಪ್ಪ?

ಚಿಂತೆಯ ಹೊತ್ತು ತರಲಮ್ಮ

ಕೋಗಿಲೆಯಾಗೆ ಕಾಗೆಗಳ

ಕಂಠವು ಯಾಕೆ ಇಂಪಿಲ್ಲ

ಸೃಷ್ಟಿ ಯು ಮಾಡೋ ಅಡುಗೆಯಲಿ

ತಪ್ಪೇ ಹುಡುಕುವ ಹಾಗಿಲ್ಲ..

ಕುರುಡು ನಾನ್ಯಾಕಮ್ಮ?

ಯಾರದೀ ತಪ್ಪಮ್ಮ?

ತಪ್ಪಿನ ಅರಿವನ್ನು ಅರಿಯದ ತಪ್ಪಮ್ಮ

ಅಮ್ಮ ಅಮ್ಮ ಹಾಡಮ್ಮ?

ಹಾಡಿಗೆ ಸೋಲೊದ್ಯಾಕಮ್ಮ?

ಹಾಡಿಗೆ ಸೋಲೆ ಇಲ್ಲಮ್ಮ

ಮಾತು ಅಮ್ಮ ಹಾಡು ಅವರಮ್ಮ.

-------------------------------


    ಹಾಗಾದರೆ..ಈ ಹಾಡಿನ ವಿರುದ್ದ ಪ್ರಶಸ್ತಿ ಬಾಚಿಕೊಂಡ ಹಾಡು,ಸಾಹಿತಿ ಯಾರು? ಎಂದು ಹುಡುಕುತ್ತಾ ಹೋದಂತೆ ಹಿಂದಿಯ ಪ್ರಸಿದ್ದ ಸಾಹಿತಿ ಜಾವೇದ್ ಅಕ್ತರ್ " ಸಾಜ್" ಚಿತ್ರಕ್ಕೆ ರಚಿಸಿದ ಗೀತೆಗೆ ರಾಷ್ಟ್ರಪ್ರಶಸ್ತಿ ದೊರಕುವಂತಾಗುತ್ತದೆ.ಅಂದೇ ಹಂಸಲೇಖ ರ ಹಾಡಿನ ಸಾಹಿತ್ಯವನ್ನ ಇಂಗ್ಲೀಷ್ ಗೆ ಅನುವಾದಿಸಿ ನೀಡಿದ್ದರೆ ಬಹುಶಃ ಹಂಸಲೇಖ ರಿಗೆ ರಾಷ್ಟ್ರಪ್ರಶಸ್ತಿ ಯ ಗರಿ ಅಂದೇ ದಕ್ಕಿ ಬಿಡುತಿತ್ತು...!


  ಈಗ ಹಂಸಲೇಖರ ಹಾಡಿನ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳೋಣ...


     "ಮೌನರಾಗ" ದಲ್ಲಿ ಅಂಧ ಹುಡುಗಿಗೆ ಪ್ರಕೃತಿಯನ್ನ ಅರಿವು ಮೂಡಿಸುವ ಈ ಗೀತೆ ರಚನೆಗಿಂತ ಒಂದು ವರ್ಷದ ಮುಂಚೆ,ಹಂಸಲೇಖ ಶಿಷ್ಯರಾದ ವಿ.ಮನೋಹರ್ ಕೂಡಾ ಈ ಅಂಧಳ ಮನದೊಳಗಿನ ಪ್ರಶ್ನೆಗಳಿಗೆ ಅವಳ ದೇಹದ ಅಂಗಗಳ ಹೋಲಿಕೆ ಮಾಡಿ ಸೂರ್ಯ,ಚಂದ್ರ,ಬಣ್ಣ,ಬೆಳಕು,ಮೋಡ..ಹೀಗೆ ಪ್ರಕೃತಿಯನ್ನ ಅರ್ಥ ಮಾಡಿಸುವ ಗೀತೆಯನ್ನ "ಅನುರಾಗ ಸಂಗಮ" ಚಿತ್ರಕ್ಕಾಗಿ ಬಳಸಿದ್ದರು.ಎಸ್.ಪಿ.ಬಿ ಮತ್ತು ಸುಧಾರಾಣಿ ದನಿಯಲ್ಲಿ ಮನೋಹರವಾಗಿ ಮೂಡಿಬಂದಿತ್ತು.

ಕುಮಾರ್ ಗೋವಿಂದ್ ಮತ್ತು ಸುಧಾರಣಿ ಬಹಳ ನವಿರಾಗಿ ಅಭಿನಯಿಸಿದ ಹಾಡು,ಸಾಹಿತ್ಯ, ಸಂಗೀತ ಎಲ್ಲವೂ ಮನಕ್ಕೆ ಮುದ ನೀಡುವಂತಾಗಿತ್ತು.

ಹಂಸಲೇಖರು ಅಲೌಖಿಕತೆಗೆ ಹೆಚ್ಚು ಒತ್ತು ಕೊಟ್ಟಿದ್ದರೆ,ಮನೋಹರ್ ಲೌಖಿಕದ ಅನುಭವ ಮಾಡಿಸಿದ್ದರು.

ಆ ಸಾಹಿತ್ಯವನ್ನ ಒಮ್ಮೆ ಗಮನಿಸಿ..


------------------------------

ಅನುರಾಗ ಸಂಗಮ (೧೯೯೫) - ತಾವರೆ ಓ ತಾವರೆ...    ತಾವರೆ ಓ ತಾವರೆ...

ಸಂಗೀತ ಮತ್ತು ಸಾಹಿತ್ಯ : ವಿ.ಮನೋಹರ  ಗಾಯನ : ಎಸ್ಪಿ.ಬಿ. ಸುಧಾರಾಣಿ


ಕೋರಸ್ :  ಆಆಆ... ಆ.. ಆ...ಆ

ಗಂಡು : ತಾವರೆ ಓ ತಾವರೆ...    ತಾವರೆ ಓ ತಾವರೆ...

            ಭೂದೇವಿಯಾ ಮೈಮ್ಯಾಲಂಗನ  ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ...

             ತಾವರೆ ಓ ತಾವರೆ...(ಆಆಆ..)  ತಾವರೆ ಓ ತಾವರೆ...(ಆಆಆ..)

ಕೋರಸ್ :  ಆಆಆ... ಆ.. ಆ...ಆ  ಆಆಆ... ಆ.. ಆ...ಆ  ಆಆಆ... ಆ.. ಆ...ಆ  


ಗಂಡು : ಮುಂಜಾನೆ ಮುಸ್ಸಂಜೆ ಭುವಿಗೆ ಸೂರ್ಯನಾರತಿ

ಹೆಣ್ಣು : ಅಂದ್ರೇ ಸೂರ್ಯ ಹೆಂಗಿರಾಂತನೇ...

ಗಂಡು : ಮುದ್ದಾದ  ಈ ಕೆನ್ನೇ ಕೆಂಪು ಸೂರ್ಯನಾಕೃತಿ...

ಹೆಣ್ಣು : ಬಣ್ಣ ಅಂದರೇ ಹೆಂಗಿರುತ್ತೇ...

ಗಂಡು : ಮುತ್ತೊಂದು ಮೈಸೋಕಿ ಮಧುರ ಮಧುರ ಕಂಪನ

            ಮನದಲ್ಲಿ ನೂರಾರು ಭಾವವೆನೇ ಬಣ್ಣ

            ನಿನ್ನ ಹುಬ್ಬನಂತೆಯೇ ಚೆಲುವ ಮಳೆಬಿಲ್ಲದೂ

            ಇಂಥ ನುಣುಪಾದ ರೆಕ್ಕೆನೇ ಹಾರೋ ಚಿಟ್ಟೆಯೂ

            ತಾವರೆ ಓ ತಾವರೆ...    ತಾವರೆ ಓ ತಾವರೆ...

            ಭೂದೇವಿಯಾ ಮೈಮ್ಯಾಲಂಗನ  ಚಿತ್ತಾರವ ಲಾವಣಿ ಹಾಡಲಿ ತೋರಿಸುವೇ...

            ತಾವರೆ ಓ ತಾವರೆ...    ತಾವರೆ ಓ ತಾವರೆ...


ಗಂಡು : ಇರುಳೆಲ್ಲಾ ಈ ಗಲ್ಲದಂತೇ ಹೊಳೆವ ಚಂದಿರ ಹೂಂ... ಹೂಂ...  ಹೂಂ...

ಹೆಣ್ಣು : ಈ ಇರುಳು ಹಗಲು ಹೆಂಗಿರುತ್ತೇ.....

          ನಿದಿರೇನೇ ಇರುಳಮ್ಮಾ ಹಗಲು ಅಂದರೆಚ್ಚರಾ..

ಗಂಡು : ಮೋಡಗಳು ತಾರೆಗಳೂ ಅಂದರೇನೂ....

            ಈ ಮುಂಗುರುಳಾ ಮಾಲೆ ತೇಲೋ ಮುಗಿಲ ಸಾಲ್ಗಳೂ

            ಈ ಕಣ್ಣ ಪ್ರತಿರೂಪ ಸಾವಿರಾರು ತಾರೆ

            ಸೃಷ್ಠಿ ಚೆಲುವೆಲ್ಲವಾ ಜಾಣೆ ನಿನ್ನಲ್ಲಿಯೇ ತುಂಬಿ ತಂದಂಥ ಆ ಬ್ರಹ್ಮ ತುಂಬಾ ರಸಿಕನೂ

            ತಾವರೆ ಓ ತಾವರೆ...    ತಾವರೆ ಓ ತಾವರೆ...

ಕೋರಸ್ :  ಆಆಆ... ಆ.. ಆ...ಆ   ಆಆಆ... ಆ.. ಆ...ಆ  

------------------------------------


ಹಂಸಲೇಖ,ವಿ.ಮನೋಹರ್ ಈ "ಕುರುಡು ಗೀತೆ" ರಚನೆ ಮಾಡುವ  ಸುಮಾರು ಇಪ್ಪತ್ತು ವರುಷದ ಹಿಂದೆ

ಅಂದರೆ 1976 ರಲ್ಲಿ "ಚಿರಂಜೀವಿ" ಚಿತ್ರದಲ್ಲಿ ಆರ್.ಎನ್.ಜಯಗೋಪಾಲ್ ಈ ತೆರನಾದ ಅಂಧರ ಭಾವನೆಗಳಿಗೆ ಉತ್ತರಿಸುವ ಪ್ರಶ್ನೋತ್ತರದ ಗೀತೆಯನ್ನ ರಚನೆ ಮಾಡಿದ್ದರು.ಶ್ರೀನಾಥ್ ಮತ್ತು ಕುರುಡಿ ಪಾತ್ರದಲ್ಲಿ ಮಂಜುಳ ಮುಗ್ದವಾಗಿ ಕೇಳುವ ಪ್ರಶ್ನೆಗಳಿಗೆ ಶ್ರೀನಾಥ್ ಬಹಳ ಮನೋಜ್ಞವಾಗಿ ಉತ್ತರಿಸುವ ಮಧುರ ಗೀತೆ ಇಂದಿಗೂ ಕೇಳುಗರ ಮನದಲ್ಲಿ ಅಚ್ಚಳಿದೇ ಉಲಿಯುತ್ತಿದೆ.ಆರ್.ಎನ್ ಜಯಗೋಪಾಲ್ ಬಹಳ ಪ್ರಬುದ್ದವಾಗಿ ಅಷ್ಟೇ ಸರಳವಾಗಿ ಬರೆದ ಸಾಹಿತ್ಯಕ್ಕೆ ಸೊಗಸಾದ ರಾಗ ಸಂಯೋಜನೆ ಮಾಡಿದ್ದವರು ವಿಜಯಭಾಸ್ಕರ್.


--------------------------------

ಚಿತ್ರ- ಚಿರಂಜೀವಿ(18-05-1976)

ಗಾಯಕರು- ಎಸ್ ಪಿ.ಬಿ, ವಾಣಿಜಯರಾಮ್

ಸಂಗೀತ- ವಿಜಯಭಾಸ್ಕರ್

ಸಾಹಿತ್ಯ- ಆರ್‌.ಎನ್.ಜಯಗೋಪಾಲ್


ನಿನ್ನ ಕಂಗಳ ಜ್ಯೋತಿಯಾಗುವೆ ನಾನು

ನನ್ನ ಕಣ್ಣಲಿ ಜಗವ ಕಾಣುವೆ

ನೀನು

ಒಲವು ಕಂಡ ಹೃದಯದಲ್ಲಿ

ಎಂದೂ ಇರುಳಿಲ್ಲ

ಚೆಲುವು ಧರೆಯೆಲ್ಲಾ..


                            ||ಪ||


ನೀರಲಿ ತೇಲುವ ಎಲೆಗಳ

ನಡುವೆ

ಅರಳಿದ ಹೂವಿದು ಏನು?

ರವಿಯನು ಕಂಡು ಅರಳುತ

ನಗುವ ತಾವರೆ ಹೂವಿದು ತಾನು

ಈ ಹೂವು ಹೇಗಿದೆ?

ನಿನ್ನೀ‌‌ಮೊಗದ ಹಾಗಿದೆ..


                    ‌            ||ಪ||


ಗಾಳಿಯು ಬೀಸಲು ತಲೆಯದು ತೂಗಿ

ಆಡುವ 

ಇದರ ಹೆಸರೇನು?

ಆಸರೆಗಾಗಿಯೇ ಮರವನು ಬಳಸಿ

ನಿಂತಿಹ ಬಳ್ಳಿಯು ತಾನು

ಈ ಬಳ್ಳಿ ಹೇಗಿದೆ?

ನಿನ್ನೀ ನಡುವಿನ ಹಾಗಿದೆ..


                                  ||ಪ||


ದೂರದಿ ಕೇಳುವ ಗಂಟೆಯು

ಮೊಳಗುವ

ಮಂದಿರದಲ್ಲಿಹುದೇನು?

ಭಕುತರಿಗಾಗಿ ಗುಡಿಯಲಿ ನೆಲಸಿಹ

ದೇವರ ಮೂರುತಿ ತಾನು

ಮೂರುತಿ ಹೇಗಿದೆ?

ನಿನ್ನೀ ಮನಸಿನ ಹಾಗಿದೆ...


                                     ||ಪ||

--------------------------------


 ಇಲ್ಲಿ ಆರ್.ಎನ್.ಜಯಗೊಪಾಲ್ ಬರೀ ಸಾಹಿತಿಯಾಗಿ ಈ ಹಾಡು ರಚಿಸಿದರೆ,ವಿ.ಮನೋಹರ್ ಮತ್ತು ಹಂಸಲೇಖ ತಮ್ಮದೇ ಸಾಹಿತ್ಯಕ್ಕೆ ತಮ್ಮದೇ ಸಂಗೀತದಿಂದ ಅಂಧತೆಯ ಹಾಡಿಗೆ ಅಲಂಕರಿಸಿದ್ದಾರೆ.ಇಲ್ಲಿ ಒಬ್ಬೊಬ್ಬರ ಅನುಭವದ ಸಾಹಿತ್ಯಗಳು ಒಂದೇ ತೆರನಾದ ಅರ್ಥದಂತಿದ್ದರೂ ತಮ್ಮದೇ ವಿಶಿಷ್ಟತೆಯನ್ನ ಹೊಂದಿರುವ ಹಾಡುಗಳಿವು ಎಂದರೆ ತಪ್ಪಲ್ಲ.ಮೂವರು ಸಾಹಿತಿಗಳ ಸಾಹಿತ್ಯ ಮತ್ತು ಹಾಡುಗಳನ್ನ ಇಲ್ಲಿ ನೀಡುತಿದ್ದೇನೆ ..ತೀರ್ಪು ನಿಮ್ಮದೇ..

ತಮ್ಮ ಅನುಭವವನ್ನ ಒಬ್ಬೊಬ್ಬರು ಕಟ್ಟಿಕೊಡುವ ಶೈಲಿ ನಿಜಕ್ಕೂ ವಿಭಿನ್ನವಾಗಿವೆ ಎಂದಷ್ಟೇ ಹೇಳಬಹುದು.


  ಮೊನ್ನೆ ಹಂಸಲೇಖ ಎಸ್.ಪಿ.ಬಿ ಬಗ್ಗೆ ಮಾತನಾಡುತ್ತಾ ಮಾತಿನ ಮಧ್ಯೆ ಹೇಳಿದ, ರಾಷ್ಟ್ರಪ್ರಶಸ್ತಿ ವಂಚಿತ ಒಂದು ಹಾಡಿನ ವಿಚಾರದ ಬೆನ್ನತ್ತಿ ಹೊರಟ ಗಾನಶಿಕಾರಿಗೆ ಬಹುದೊಡ್ಡ ಗಾನಗಹನವೇ ಸೆರೆಯಾಯ್ತು.  ಹುಡುಕುತ್ತಾ..ಹುಡುಕುತ್ತಾ ಗಾನಗಣಿಗಾರಿಕೆ ಗೆ ಹೊರಟ ಗಾನ ಮನಸಿಗೆ ಇಷ್ಟೆಲ್ಲಾ ಕಲೆ ಹಾಕುವ ಶ್ರಮವಹಿಸಬೇಕಾಯ್ತು.ಜೊತೆಗೊಂದಷ್ಟು ತಿಳಿಯದ ಗಾನಕೌತುಕಕ್ಕೂ ದಾರಿಯಾಯ್ತು.ಅನ್ವೇಷಿಸಿ ಲೇಖನ ಬರೆದು ಮುಗಿಸೋ ಹೊತ್ತಿಗೆ ಗಂಟೆ..ಮಧ್ಯರಾತ್ರಿ ಹನ್ನೆರಡು ದಾಟಿ ಎಚ್ಚರಿಸಿತ್ತು..!


  ಗಾನಾಸುಮಾ ಪಟ್ಟಸೋಮನಹಳ್ಳಿ

ಗಾನಗಣಿಗಾರಿಕೆ

 #ಮೊನ್ನೆ_ಹಂಸಲೇಖರು_ನೀಡಿದ #ಗಾನಕರುಹು_ಬೆನ್ನತ್ತಿ_ಹೊರಟ #ಗಾನಶಿಕಾರಿ_ಗಾನಗಣಿಗಾರಿಕೆ #ಯಲ್ಲಿ_ಸೆರೆಯಾಯ್ತು...!!!   ಮೊನ್ನೆ ಎಸ್.ಪಿ‌.ಬಾಲಸುಬ್ರಮಣ್ಯಂ ನಿಧನರಾದಾಗ ಕನ...