ಗಾನಗಣಿಗಾರಿಕೆ
#ಆಕಾಶವೇ_ಬೀಳಲಿ_ಮೇಲೆ ..
#ಬರೆದ_ಮೂಲಕವಿಯ_ಪಾಲಿಗೆ
#ನ್ಯಾಯವು_ದೇವರ ಸಮಯದಲ್ಲಿ_ಇಲ್ಲ ... !!!
==========================
"ಈ..ಮಾತಿಗೆ ಮನವೇ ಸಾಕ್ಷಿ ...!
ಈ ಹಾಡಿಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ .... ಎನ್ನುವಂತಿದೆ ಮೂಲ ಕವಿಯ ನಿವೇದನೆ ... !!!
"ತಪ್ಪಾಗಿ ತಿಳಿದು ಬೆಪ್ಪಾದ ಗಂಡು ಗಿಳಿ
ಕಣ್ ಕಣ್ ಬಿಟ್ಟಿತಮ್ಮ ..
ಅದು ತನ್ನಂತೆ
ನಡೆಯದು ಎಂಬ ಸತ್ಯವ ಅರಿಯಿತಮ್ಮ ... "
ಈ ಸಾಲು "ಬೆಂಕಿಯಲ್ಲಿ ಅರಳಿದ ಹೂವು" ಚಿತ್ರದ ಹಾಡೊಂದರಲ್ಲಿ ಬರುವಂತಹುದು.ಈಗ ಈ ಸಾಲುಗಳು ನೆನಪಾಗೋಕೆ ಕಾರಣವು ಇದೆ. !
"ಆಕಾಶವೇ ಬೀಳಲಿ ಮೇಲೆ..ಎಂಬ ಅತ್ಯುನ್ನತ ಹಾಡೊಂದರ ಸಾಹಿತ್ಯ ಚಿ.ಉದಯಶಂಕರ್ ಅವರಲ್ಲಿದ್ದಾರೆ. ಈ ಸಾಹಿತ್ಯ ಬೇರೊಬ್ಬರದಾಗಿತ್ತು ..! ಮಾತ್ರ ಅಜ್ಞಾನಾತವಾಗಿಯೇ ಉಳಿದುಹೋದ.ಸಾಹಿತ್ಯ ಉದಯಶಂಕರ್ ಹೆಸರಲ್ಲೇ ಜನಪ್ರಿಯವಾಗಿಹೋಯ್ತು ..!
ಆದರಿಯಲ್ಲಿ ಆ ಕವಿ ಆ ಹಾಡನ್ನ ಅಮರಗೊಳಿಸಿದ ಚಿ.ಉದಯಶಂಕರ್ ರನ್ನ ಕೊಂಡಾಡುತ್ತಾರೆ ಇಲ್ಲಿ ಆಕಸ್ಮಿಕವೆಂಬಂತೆ ...! ಸಾವಿರಾರು ಹಾಡುಗಳ ಸರಾಗವಾಗಿ ಬರೆದ ಉದಯಶಂಕರ್ ತಮ್ಮ ಹಾಡುಗಳಿಗೆ ಮೂಲ ಪ್ರೇರಣೆ ದಾಸ ಸಾಹಿತ್ಯ, ವಚನ ಸಾಹಿತ್ಯಗಳೇ ಕಾರಣವೆಂದು ಹೇಳಿದ್ದರು.ಹಾಗೆ ಈ ಹಾಡು ಕೂಡ ಯುವ ಕವಿ ಬರೆದ ಕವಿತೆಯೊಂದರ ಸ್ಪೂರ್ತಿ ಕೂಡ.
ಈ ಚಿತ್ರರಂಗದಲ್ಲಿ ಈ ರೀತಿಯ ಸನ್ನಿವೇಶಗಳು ಆಕಸ್ಮಿಕ, ಅಚಾನಕ್ ಅಂದುಕೊಂಡರೂ ಎಷ್ಟೋ ಹಿರಿಯ ಸಾಹಿತಿಗಳ ಬಳಿ, ಸಂಗೀತ ನಿರ್ದೇಶಕರ ಬಳಿ ಉದರ ನಿಮಿತ್ತವಾಗಿ ಕೆಲಸಕ್ಕೆ ಸೇರಿ ಅವರ ಆಣತಿಯಂತೆ ತಮ್ಮ ಮಸ್ತಕದ ಪದಗಳ ಗೀಚಿದರೂ ಅದನ್ನು ತೆರೆಯಲು ಅವರ ಹೆಸರಿನಲ್ಲಿ ಮೂಡಿ ಬರುತ್ತಿದೆ ..! ಏಕೆಂದರೆ ಅವರ ಬರವಣಿಗೆ ಹಣಕ್ಕೆ ಮಾರಾಟವಾಗಿಬಿಟ್ಟಿರುತಿತ್ತು ..! ಅಲ್ಲಿ ತಮ್ಮದೇ ಬಸಿರಾದರೂ..ಹೆಸರು ಮತ್ತಾರದೋ ಆಗಿರುತಿದ್ದ ಅದೆಷ್ಟೋ ಹಾಡುಗಳು ಪರದೇಕೇ ಪೀಚೇ ಬಹಳಷ್ಟಿವೆ ..! ಇಲ್ಲಿ ಉದಯಶಂಕರ್ ಯುವ ಕವಿಯವರ ಕವಿತೆ ಮೆಚ್ಚಿ, ಇಟ್ಟುಕೊಂಡು ಬಳಸಿದ ಘಟನೆ ನಿಜಕ್ಕೂ ಕವಿತೆ ಶ್ರೇಷ್ಠತೆ ಎಂದುಕೊಳ್ಳುವೆ. ನಮ್ಮ ಜೊತೆ ಹಂಚಿಕೊಂಡ ಮೂಲ ಕವಿ ಅಣ್ಣಾವ್ರ ಅಪ್ಪಟ ಅಭಿಮಾನಿ
#ಹಾಲುಜೇನುರಾಮ್_ಕುಮಾರ್ ..!
ಆ ಮೂಲ ಕವಿಯ ಮಾತಿಗೂ ಮುನ್ನ ಹಾಡಿನ ಕುರಿತು ಒಂದಷ್ಟು ತಿಳಿಯೋಣ ..
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದ "ಕಾವೇರಿ" ಮತ್ತು "ಲೋಕಪಾವನಿ" ನದಿಯ ದಡದಲ್ಲಿರುವ "ಕರಿಘಟ್ಟ" ಎಂಬ ಹಸಿರ ಸಿರಿಯ ತಾಣದಲ್ಲಿ ಚಿತ್ರೀಕರಣವಾದ ಈ ಹಾಡು ಕೇಳದವರೇ ಇಲ್ಲ.ನಮ್ಮ ವಾದ್ಯಗೋಷ್ಠಿ ಯಲ್ಲಂತೂ ವಧುವರರು ತಾಳಿ ಕಟ್ಟುವ ಹೊತ್ತಿಗೆ ನಾವು ಸದಾ ಹಾಡುವ ಹಾಡು ಇದೇ.
ಈ ಹಾಡಿಗೆ ಅಣ್ಣಾವ್ರು ಮತ್ತು ಬಿ.ಸರೋಜಾದೇವಿ ಅಭಿನಯ ಎಲ್ಲಾ ಯುವ ಪ್ರೇಮಿಗಳ "ಪ್ರೇಮಗೀತೆ" ಯಾಗಿ ಮನದಲ್ಲಿ ಉಳುದುಬಿಡುವಂತ ಮಹೋನ್ನತ ಹಾಡಿದು.
ಹಾಗೆ ಇದರ ಸಾಹಿತ್ಯ ಕೊಂಚ ಗಮನಿಸಿ ...
ಹಸೆಮಣೆಯು ನಮಗೆ ಇಂದು
ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೆ
ಶುಭಕೋರುವ ತೋರಣವು
ಹಕ್ಕಿ ಗಳ ಚಿಲಿಪಿಲಿ ಗಾನ
ಮಂಗಲಕರನಾದವು
ಈ ನದಿಯ ಕಲರವವೇ
ಮಂತ್ರಗಳ ಘೋಷವು
ಸಪ್ತಪದಿ ಈ ನಡೆಯಾಯ್ತು
ಸಂಜೆರಂಗು ಆರತಿಯಾಯ್ತು ...
ಇಂದೀಗ ಸಮಯದಲ್ಲಿ ಜೀವ ಬೆರೆತೂ
ಸ್ವರ್ಗವಾಯ್ತು ... "
ಪ್ರೇಮಿಗಳಿಬ್ಬರು ತಮ್ಮ ಪಾಣಿಗ್ರಹಣಕ್ಕೆ ಪಕೃತಿಯನ್ನೇ ವೇದಿಕೆ ಮಾಡಿ, ಸಾಕ್ಷಿ ಮಾಡಿ ಹಾಡುವಂತ ಈ ಸಾಹಿತ್ಯ, ಪಿ.ಬಿ.ಎಸ್ ಗಾಯನ, ರಾಜನ್ ನಾಗೇಂದ್ರ ರ ಸುಮಧುರ ಸಂಗೀತ ಈ ಹಾಡು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಸ್ವಚ್ಛ ಸುಂದರಗೀತೆ.
ಇಂತಹ ಅನನ್ಯ ಗೀತೆ ಬರೆದ ಕವಿ ಯಾರು? ಗೊತ್ತೆ?
ಅದಕ್ಕೂ ಮೊದಲು ಈ ಚಿತ್ರದ ಕುರಿತು ಒಂದಷ್ಟು ಮಾಹಿತಿ.
1971 ರ ಹೊತ್ತಿನಲಿ ಬಿಡುಗಡೆಯಾದ ಅಣ್ಣಾವ್ರ ಚಿತ್ರ "ನ್ಯಾಯವೇ ದೇವರು".
ನಿರ್ದೇಶಕ ಸಿದ್ದಲಿಂಗಯ್ಯ "ಬಂಗಾರದ ಮನುಷ್ಯ" ಚಿತ್ರ ಮಾಡುವುದಕ್ಕೆ ಎರಡು ವರ್ಷದ ಹಿಂದೆ ನಿರ್ದೇಶನ ಮಾಡಿದ ಚಿತ್ರ "ನ್ಯಾಯವೇ ದೇವರು".
ಅಶ್ವತ್ಥ್ ನಿವೃತ್ತ ನ್ಯಾಯಾಧೀಶ. ಆತನ ಮಗ ರಘು (ರಾಜಕುಮಾರ್) ರಘು ಹರಟೆಮಲ್ಲಿ ಲಲಿತಳನ್ನು (ಆರತಿ) ಮದುವೆ ಆಗಲೆಂದು ಅವಳ ತಂದೆ (ಸಂಪತ್) ಮತ್ತು ಅಶ್ವತ್ಥ್ ಇಬ್ಬರಿಗೂ ಆಸೆ. ಆದರೆ ರಘುವಿಗೆ ಸೈಲೆಂಟ್ ಶಾಂತಿ (ಬಿ. ಸರೋಜಾದೇವಿ) ಇಷ್ಟ.
ಅಶ್ವತ್ಥ್ ಶಾಂತಿಗೆ ದುಡ್ಡು ಕೊಟ್ಟು ಮಗನನ್ನು ಮರೆಯಲು ಹೇಳಿದರೂ ಒಂದು ಮಳೆಯ ರಾತ್ರಿ ರಘು ಶಾಂತಿ ಒಂದಾಗುತ್ತಾರೆ. ಶಾಂತಿ ಆ ರಾತ್ರಿ ಅಲ್ಲಿಂದ ಯಾರಿಗೂ ಹೇಳದೆ ಹೊರಟು ಹೋದಾಗ ಇವಳ ಸೀರೆ ಉಟ್ಟು ಇವಳ ಬ್ಯಾಗ್ ಕದ್ದಾಕಿ ರೈಲಿಗೆ ಸಿಕ್ಕಿಕೊಂಡಾಗ ಶಾಂತಿ ಆತ್ಮಹತ್ಯೆ ಮಾಡಿಕೊಂಡಳೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅವಳು ಅವಳ ಚಿಕ್ಕಪ್ಪ ಎಂ. ಪಿ. ಶಂಕರ್ ಕೊಲೆ ಆಪಾದನೆ ಮೇಲೆ ಕೋರ್ಟಿಗೆ ಬಂದಾಗ ಜಡ್ಜ್ ರಘುವಿಗೆ ಶಾಕ್.
ಪಾಪಮ್ಮ ಶಾಂತಿಯ ತಾಯಿ. ದಿನೇಶ್ ಕಳ್ಳ ಸಾಗಾಣಿಕೆ ಮಾಡುತ್ತಾನೆ. ಅವನ ಮಗ ವಿವೇಕ (ದಿವಂಗತ ನಟ ರಮೇಶ್) ಪಬ್ಲಿಕ್ ಪ್ರಾಸಿಕ್ಯೂಟರ್ ದ್ವಾರಕೀಶ್ ಕುಡುಕ ಲಾರಿ ಚಾಲಕ. ಅವನ ಮೂಗಿ ಪತ್ನಿ ಬಿ. ಜಯಾ
ಆರತಿಯ ಡಯಲಾಗ್ ಡೆಲಿವರಿ ಬಲು ವಿಶಿಷ್ಟ! ಪಿಬಿಎಸ್ ಕುಣಿದಾಡುವ ವಯಸಿದು ಮತ್ತು ಎವರ್ ಗ್ರೀನ್ ಆಕಾಶವೆ ಬೀಳಲಿ ಮೇಲೆ. ಪಿ ಸುಶೀಲ ಅವರ ಎಂದೆಂದೂ ನೀವು ಸುಖವಾಗಿರಿ ಮತ್ತು ಎಸ್ ಪಿ ಬಿ ಅವರ ಪರಮಾತ್ಮ ಆಡಿಸಿದಂತೆ ಆಡುವೆ ನಾನು. ನಾಲ್ಕೂ ಚಂದದ ಹಾಡುಗಳು.
ರಾಜ್ ಕುಮಾರ್ ಸರೋಜಾದೇವಿ ಸಲೀಂ ಅನಾರ್ಕಲಿ ನಾಟಕ ಸಿನಿಮಾಗೆ ಪೂರಕ. ಅಕ್ಬರ್ ಆಗಿ ವಜ್ರಮುನಿ ಬಹಳ ಚೆನ್ನ.
ಅಣ್ಣಾವ್ರು ಎಲ್ಲ ತರಹದ ಎಮೋಶಗಳನ್ನು ನಿರ್ವಹಿಸಿ ಮಿಂಚಿದ್ದಾರೆ.
ಹೀಗೆ ತಯಾರಾದ ಈ ಚಿತ್ರದ "ಆಕಾಶವೇ ಬೀಳಲಿ ಮೇಲೆ ... ಹಾಡು ಹುಟ್ಟಿದ್ದು, ಅದು ಚಿ.ಉದಯಶಂಕರ್ ಕೈ ಸೇರಿದ್ದು, ನಂತರ ಮಾರ್ಪಾಡಾಗಿ ಅಣ್ಣಾವ್ರ ಶ್ರೇಷ್ಠ ಹಾಡುತ್ತಿರುವುದು ಹೇಗೆ ಈ ಕವಿತೆ ಬರೆದ ಆ ಉದಯೋನ್ಮುಖರ ಮಾತಿನಲ್ಲೇ ಕೇಳೋಣ ....
"ಗಾನಾಸುಮ ಪಟ್ಟ ಸೋಮನಹಳ್ಳಿ ಯವರ ಅಭಿಲಾಶೆಯ ಮೇರೆಗೆ ...
** ಆಕಾಶವೇ ಬೀಳಲಿ ಮೇಲೆ- ರಚನಕಾರ ತೆರೆಯುವ ಮರೆಯಲ್ಲಿ? **
ನ್ಯಾಯವೇ ದೇವರು ಚಿತ್ರದ -ಆಕಾಶವೇ ಬೀಳಲಿ ಮೇಲೆ -ಈ ಗೀತೆ ಇಂದು ಜನಮಾನಸದಲ್ಲಿ ಒಂದು ಶ್ರೇಷ್ಠ ಗೀತೆ. ಸರ್ವಕಾಲಕ್ಕೂ ಅನ್ವಯವಾಗುವ ಒಂದು ಶುದ್ಧ ಪ್ರೇಮ ಗೀತೆ. ಒಂದರ್ಥದಲ್ಲಿ ಅದು ಭಾವಗೀತೆ, ಪ್ರೇಯಸಿಗೆ ಭರವಸೆಯ ಗೀತೆ ಇತ್ಯಾದಿ ... ಹೀಗೆ ಪ್ರಶಂಸೆಗೆ ಪಾತ್ರವಾಗಿರುವ ಈ ಗೀತೆಯ ಶ್ರೇಯ ಮಧುರ ರಾಗ ಸಂಯೋಜನೆ ಮಾಡಿದ ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರ, ಅಮರ ಗಾಯನ ಸುಧೆ ಹರಿಸಿದ ಪಿ.ಬಿ.ಶ್ರೀನಿವಾಸ್, ಗೀತೆಗೆ ತನ್ನ ಶ್ರೇಷ್ಠ ಅಭಿನಯದಿಂದ ಜೀವ ನೀಡಿದ ರಾಜ್ ಕುಮಾರ್ ರ ಜೊತೆಗೆ ಈ ಗೀತೆಯ ಕರ್ತೃವಿಗೂ ಸೇರುತ್ತದೆ ಅಲ್ಲವೇ? ಆ ಕರ್ತೃ ದಾಖಲೆಗಳ ಪ್ರಕಾರ ಸಾಹಿತ್ಯರತ್ನ ಚಿ.ಉದಯಶಂಕರ್. ಆದರೆ ವಾಸ್ತವದಲ್ಲಿ ಇಲ್ಲಿ ಮತ್ತೊಬ್ಬ ಅಪರಿಚಿತ ವ್ಯಕ್ತಿಯ ಅವಕಾಶವಿದೆ. ಆತ ಒಬ್ಬ ಸಾಮಾನ್ಯ ಲೇಖಕ. ಕಥೆ-ಕವನ ಅವನ ಹವ್ಯಾಸ ಅಷ್ಟೇ. ಕೇವಲ ಆಪ್ತರಿಗಷ್ಟೇ ವೇದ್ಯವಾಗಿದ್ದ ಅವನ ಪ್ರತಿಭೆ ಹೊರಬರಲೇ ಇಲ್ಲ. ಎಲೆ ಮರೆಯ ಕಾಯಿಯ ತೆರದಿ ಆತ ಅಡಗಿ ಕುಳಿತ. ಲೇಖಕನಾಗಲಿಲ್ಲ.ಪತ್ರಕರ್ತನಾಗಲಿಲ್ಲ, ಪತ್ರಿಕಾ ವರದಿಗಾರನಾಗಲಿಲ್ಲ. ಬದಲಾಗಿ ಸಾವಿರ ಮಂದಿಯಲ್ಲಿ ಒಬ್ಬರಂತೆ ಜೀವನೋಪಾಯಕ್ಕಾಗಿ ಒಬ್ಬ ಬ್ಯಾಂಕ್ ಉದ್ಯೋಗಿಯಾದ.
೧೯೭೧ ರಲ್ಲಿ ಆತ ತಾನು ರಚಿಸಿ ಬಹುವಾಗಿ ಮೆಚ್ಚಿದ ಐದು ಕವನಗಳನ್ನು ಪರಾಮರ್ಶೆಗಾಗಿ, ವಿಮರ್ಶೆಗಾಗಿ ಚಿ.ಉದಯ ಶಂಕರ್ ರವರಿಗೆ ನೀಡಿದರು. ಅದರಲ್ಲಿ ಎರಡನ್ನು ಮೆಚ್ಚಿ ಚಿ.ಉದಯಶಂಕರ್ ತಮ್ಮ ಬಳಿಯೇ ಉಳಿಸಿಕೊಂಡರು. ಅದರಲ್ಲಿ ಒಂದು ಈ ಆಕಾಶವೇ ..... ಆ ಕವನದಲ್ಲಿದ್ದ ಕಲ್ಪನೆ, ಪದಗಳ ಬಳಕೆಯನ್ನು, ಹೋಲಿಕೆಯನ್ನು ಬಹುವಾಗಿ ಮೆಚ್ಚಿದ ಅವರು ಸ್ವೈಚ್ಛೆಯಿಂದ ನ್ಯಾಯವೇ ದೇವರು ಚಿತ್ರದಲ್ಲಿ ಬಳಸಿದ್ದಾರೆ. ನಿರ್ಮಾಪಕ-ನಿರ್ದೇಶಕರು ಒಪ್ಪದ ಕಾರಣ ಅವರು ಆ ಗೀತೆಗೆ ಆ ಯುವಕನ ಹೆಸರು ಹಾಕಲಾಗಲಿಲ್ಲ. ತುಂಬಾ ನೋವಿನಿಂದಲೇ ಆ ಗೀತೆಗೆ ತಮ್ಮ ಹೆಸರನ್ನು ಬಳಸಿದರು. ಆದರೆ ಹಾಗೆ ಮಾಡುವ ಮುನ್ನ ಆ ಯುವಕನ ಒಪ್ಪಿಗೆಯನ್ನು ಪಡೆಯಲು ಅವರಿಗೆ ಮರೆಯಲಾಗಲಿಲ್ಲ.
ಒಂದಂತೂ ನಿಜ. ಆ ಗೀತೆಯಲ್ಲಿ ನೀವು ಕಾಣುವ ಪದ ಜೋಡಣೆ (ಟ್ಯೂನಿಗೆ ಅನುಸಾರವಾಗಿ) ಚಿ.ಉದಯ ಶಂಕರ್ ರವರದ್ದೇ. ಆದರೆ ಆ ಗೀತೆಯ ಪರಿಕಲ್ಪನೆ, ಪದಗಳ ಆಯ್ಕೆ, ಹೋಲಿಕೆ ಎಲ್ಲ ಆ ಯುವಕನದು. ರಾಜ್ ಕುಮಾರ್ ಅಭಿಮಾನಿಯಾದ ಆತನಿಗೆ ತನ್ನ ಕಲ್ಪನೆಯೇ ಹಾಡಿಗೆ ತನ್ನ ಆರಾಧ್ಯ ದೈವ ಅಭಿನಯವನ್ನು ಮರೆಯಲಾಗದ ಸವಿ ನೆನಪು. ಆ ಆಟಗಾರ ಆತ ಅದೃಷ್ಟವಂತ. ಆದ್ರೆ ಎಲ್ಲರಲ್ಲೂ ಅದನ್ನು ವ್ಯಕ್ತಪಡಿಸುವ ಸ್ಥಿತಿಯಲ್ಲಿ ಇಲ್ಲದ ದುರದೃಷ್ಟಶಾಲಿ ಕೂಡ ಆತನೇ.
ಇಲ್ಲಿ ಚಿ.ಉದಯ ಶಂಕರ್ ರವರ ತಪ್ಪು ಲವಲೇಶವೂ ಇಲ್ಲ. ಅವರನ್ನು ಯಾರೂ ನಿಂದಿಸವುದು ಬೇಡ. ಕೊನೆಯ ಪಕ್ಷ ರಾಜ್ ಕುಮಾರ್ ಅಭಿಮಾನಿಗಳಲ್ಲಿ ಆ ಗೀತೆಯಲ್ಲಿ ತನ್ನ ಅಳಿಲು ಸೇವೆ ಇದೆ ಎಂದು ಆತ ಹಂಚಿಕೊಂಡು ಸಂತೋಷಿಸಲಿ. ಅದೇ ಈ ಲೇಖನದ ಉದ್ದೇಶ.
ಕೊನೆಯದಾಗಿ, ಆ ಯುವಕ ಯಾರು ಗೊತ್ತೇ? ರಾಜ್ ಕುಮಾರ್ ಅನನ್ಯ ಅಭಿಮಾನಿಯಾದ ಬಹುಜನರ ಪ್ರೀತಿಯ ಹಾಲು ಜೇನು ರಾಮಕುಮಾರ್ ಆದ ನಾನೇ.
ಅಂದು ಚಿ.ಉದಯಶಂಕರ್ ರವರಿಗೆ ನಾನು ನೀಡಿದ ಕವನ ಇಲ್ಲಿದೆ. ಇದು ನೆನಪಿಗಾಗಿ ನಾನು ಬರೆದಿಟ್ಟುಕೊಂಡಿರುವುದು (ಅವರಿಗೆ ನೀಡಿದ ಮೇಲೆ ಬಹಳ ದಿನಗಳ ನಂತರ) .ಅಲ್ಪ ಸ್ವಲ್ಪ ವ್ಯತ್ಯಾಸ-ತಪ್ಪು ಮಾಡಬಹುದು. ಕಾರಣ ನೆನಪಿಸಿಕೊಂಡು ಮತ್ತೆ ಬರೆದಿರುವ ಕಾರಣ.
ಆಕಾಶವು ಬಿದ್ದರೂ ಸರಿಯೇ
ನಾನಿರುವೆ ಜೊತೆ ಜೊತೆಗೆ
ಭೂಮಿಯು ಬಾಯ್ಬಿಟ್ಟರು ಸರಿಯೇ
ನೀನಿರುವೆ ನನ ಎಡೆಯೊಳಗೆ
ನಾನಿರಲು ನಿನಗಾಗಿ
ಇರಲಾರೆಯ ನೀ ನನಗಾಗಿ
ಒಡನಾಡಿ ನಾನಿರುವಾಗ
ಹೆದರಿಕೆಯೂ ನಿನಗೇಕಿಗ?
ಬಾಳ ಪಯಣದಿ ನೀ ನಡೆವಾಗ
ಜೊತೆ ಜೊತೆಗೆ ನಾ ಬರುವೆ ತೋರುತಲಿ ಅನುರಾಗ
ಕಲ್ಲು ಮುಳ್ಳ ಹಾದಿಯಲಿ ಮೊದಲ ಹೆಜ್ಜೆಯ ಸರದಿ ನನಗೆ
ನೀ ಬರುವ ಹಾದಿಯಲಿ ಇಟ್ಟು ಹೂವ ಹಾಸಿಗೆ
ಈ ಮಾತಿಗೆ ದೇವರ ಸಾಕ್ಷಿ ಬೇಕೇತಕೆ? ಭಯದೇ
ನೀನೆ ತುಂಬಿರುವ ನನ ಮನದಲ್ಲಿಸಾಕ್ಷಿ ಸಾಲದೇ
ಮನದಾಳದಿ ನಿನ್ನಾ ನೆನಪೇ ತುಂಬಿ
ನಾನಾಗೆನು ಬಳಕೆಯ ಮಧು ಹೀರಿ ಮರೆವ ದುಂಬಿ
ದಯಮಾಡಿ ನನ್ನ ನಂಬಿ
ಸುಂದರವೀ ವದನದಲಿ ಮಂದಹಾಸ ತುಂಬಿ
ನಾವು ನಿಂತ ತಾಣದಿ ಹಸಮಣೆಯ ಕಲ್ಪನೆ
ಶುಭ ಕೋರುವ ತೋರಣವ ಹಸಿರೆಲೆಯಲಿ ಕಲ್ಪನೆ
ಮಂತ್ರಘೋಷವಾಗಲೀ ಈ ನದಿಯ ಕಲರವವು
ಮಂಗಳಕರ ನಾದಕೆ ಹಕ್ಕಿಗಳ ಚಿಲಿಪಿಲಿ ಗಾನವು
ಜೊತೆಯಾಗಿ ನಡೆವುದೇ ಸಪ್ತಪದಿ ಭಾವನೆ
ಸಂಜೆಗೆಂಪು ನೀಡಲಿ ಆರತಿಯ ಬಣ್ಣನೆ
ನಾವೀಗ ಭಯ ತೊರೆದು
ಅನುರಾಗದ ಸಾಗರದಿ ಮಿಂದು
ನೋವ ಮರೆಯುವ
ಜೋಡಿ ಹಕ್ಕಿ ಯಾಗುವ
ಸ್ವರ್ಗವಾ ಸೇರುವ
ನಲಿವಾ ಹೊಂದುವ
*********************************** ಚಿ.ಉದಯಶಂಕರ್ ಮಾರ್ಪಡಿಸಿ ಸಿನಿಮಾಕ್ಕೆ ಒಗ್ಗಿಸಿದ ಸಾಹಿತ್ಯ ಹೀಗಿದೆ
ಚಿತ್ರ: ನ್ಯಾಯವೇ ದೇವರು
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಪಿ .ಬಿ ಎಸ್
ನಿರ್ದೇಶನ: ಸಿದ್ದ್ದಲಿಂಗಯ್ಯ
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಿನ್ನ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಹೆದರಿಕೆಯ ನೋಟವೇಕೆ, ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ, ಜೊತೆಗೂಡಿ ನಾ ಬರುವೆ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನೇಡೆವೆ
ನೀ ಅಡಿಯ ಇಡುವೆಡೆಯಲ್ಲಿ ಒಲವಿನ ಹೂ ಹಾಸುವೆ
ಈ ಮಾತಿಗೆ ಮನವೇ ಸಾಕ್ಷಿ ಈ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯಾ ಚೆಲ್ಲು ಚೆಲುವೆ
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಿನ್ನ ನಿನ್ನ ಕೈ ಬಿಡೆನು
ಹಸೆಮಣೆಯೂ ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳ ಘೋಷಣೆ
ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಿನ್ನ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ
ಹೀಗೆ ಕನ್ನಡ ಚಿತ್ರರಂಗದ ಅದ್ಬುತ ಹಾಡಿನ ಹಿಂದಿನ #ಗಾನಗಣಿಗಾರಿಕೆ ನಿಮಗಾಗಿ ... ನಿಮ್ಮ ಮಡಿಲಿಗೆ ..
ಮೂಲ ಸಾಹಿತಿಯ ರಚನೆಗೆ ನಿಮ್ಮ ಹಾರೈಕೆ ಹೇಳಿಬಿಡಿ.
ಗಾನಾಸುಮಾ ಪಟ್ಟಸೋಮನಹಳ್ಳಿ


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ